ಹಾವು ತುಳಿದೇನೇ
ಶಿಶುನಾಳ ಶರೀಫ
ಹಾವು ತುಳಿದೇನೇ ಮಾನಿನಿ
ಹಾವು ತುಳಿದೇನೇ ||
ಹಾವು ತುಳಿದು ಹಾರಿ ನಿಂತೆ
ಜೀವ ಕಳವಳಿಸಿತೇ ಗೆಳತಿ,
ದೇಹತ್ರಯದ ಸ್ಮೃತಿಯು ತಪ್ಪಿ
ದೇವಾ ನೀನೇ ಗತಿಯೋ ಎಂದೆ ||
ಹರಿಗೆ ಹಾಸಿಗೆಯಾದ ಹಾವು
ಹರನ ತೋಳಿನೊಳಿರುವ ಹಾವು,
ಧರೆಯ ಹೊತ್ತು ಮೆರೆವ ಹಾವಿನ
ಶಿರವ ಮೆಟ್ಟಿದೆ ಶಿವನ ದಯದಿ ||
ಬೋಧಾನಂದವಾಗಿ ಬರಲು
ಹಾದಿಯೊಳಗೆ ಮಲಗಿ ಇರಲು
ಪಾದದಿಂದ ಪೊಡವಿಗೊತ್ತಲು
ನಾದಗೊಳಿಸಿತು ನಿಜದಿ ನೋಡಿ ||
ಕಾರಡಗಿ ಊರ ಹೊರಗೆ
ದಾರಿಗಟ್ಟಿ ತರುಬಿದಂಥ
ಘೋರ ತರದ ಉರಗ ಅದರ
ಕ್ವಾರಿ ಹಲ್ಲು ಮುರಿವ ತೆರದಿ ||
ಸತ್ಯ ಶಿಶುನಾಳಧೀಶ ದೇವನ
ನಿತ್ಯ ಸೇವಿಸುವಂಥ ಮಾನಿಗೆ
ಕತ್ತಲಲ್ಲಿ ಬಂದು ಕಾಲಿಗೆ
ಸುತ್ತಿಕೊಂಡಿತು ಸಣ್ಣ ನಾಗರ ||